ಕೊರೋನಾ ಸೋಂಕಿತರ ಸಂಖ್ಯೆ ಬಹಿರಂಗಕ್ಕೂ ಮೀನಾಮೇಷವೇ..?

ನವದೆಹಲಿ: ಕೊರೋನಾದ ಈ ಸಂಕಷ್ಟದ ಸಂದರ್ಭದಲ್ಲಿ ಮಾಹಿತಿ ಹಂಚಿಕೊಳ್ಳುವುದು ಬಹಳ ಮುಖ್ಯ. ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ಸಾರ್ವಜನಿಕರಿಗೆ ಮಾಹಿತಿ ಅತ್ಯಗತ್ಯ. ಆದರೆ ಕೇಂದ್ರ ಆರೋಗ್ಯ ಸಚಿವಾಲಯವು ಒಂದು ವಾರದಿಂದ ಯಾವುದೇ ʼಬ್ರೀಫಿಂಗ್ʼ ನಡೆಸುತ್ತಿಲ್ಲ ಎಂದು ʼದಿ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್ʼ, ʼಎಕನಾಮಿಕ್ಸ್ ಅಂಡ್ ಪಾಲಿಸಿʼಯ ನಿರ್ದೇಶಕ ಡಾ. ರಮಣನ್ ಲಕ್ಷ್ಮೀನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಾಕ್ ಡೌನ್ ಸಡಿಲಿಕೆಯಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಕೇಂದ್ರ ಸರ್ಕಾರ ಅಂಕಿಸಂಖ್ಯೆಯನ್ನು ಬಹಿರಂಗ ಪಡಿಸಲು ಮೀನಾಮೇಷ ಎಣಿಸುತ್ತಿದೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ.  

ದೇಶದಲ್ಲಿ ಕರೋನಾ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಜನವರಿ 30ರಂದು, ಕೇರಳದಲ್ಲಿ. ದೇಶದಲ್ಲಿ ಕರೋನಾವನ್ನು ಹೆಡೆಮುರಿ ಕಟ್ಟಿ ಹುಟ್ಟಡಗಿಸಬೇಕು ಎಂದು ದೇಶಕ್ಕೆ ದಿಗ್ಬಂಧನ ವಿಧಿಸಿದ್ದು ಮಾರ್ಚ್ 24ರ ಮಧ್ಯರಾತ್ರಿಯಿಂದ. ಈ ರೀತಿ ಎಚ್ಚೆತ್ತುಕೊಳ್ಳಲು 54 ದಿನ ಬೇಕಾಯಿತು. ಈ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಕರೋನಾ‌ ಎಂಬುದು ಸರ್ವೆ ಸಾಮಾನ್ಯವಾದ ಒಂದು ರೋಗ ಮಾತ್ರವಲ್ಲ, ಮುಂದೊಂದು ದಿನ‌ ದೇಶಕ್ಕೆ ದೇಶವೇ ದಿಕ್ಕೆಡುವಂತಹ ಪರಿಸ್ಥಿತಿಯನ್ನು ತಂದೊಡ್ಡುವ ಮಹಾಕ್ರೂರಿ’ ಎಂದು ಎಚ್ಚರಿಸಿದ್ದರು. ರಾಹುಲ್ ಗಾಂಧಿ ಅವರು ಎಚ್ಚರಿಸಿದ್ದು ಫೆಬ್ರವರಿ 12ರಂದು. ಇದನ್ನು ಕೇಂದ್ರ ಸರ್ಕಾರ ಬೇರೆಯದೇ ರೀತಿ ಬಿಂಬಿಸಿಕೊಳ್ಳುತ್ತಿದೆ.

ಅಂಕಿ ಅಂಶಗಳು ಈಗಾಗಲೇ ಹೇಳಿದಂತೆ ಬೇರೆಯದೇ ಕಥೆಯನ್ನು ಬಿಚ್ಚಿಡುತ್ತಿವೆ. ಆದುದರಿಂದ ಈಗ ಕೇಂದ್ರ ಸರ್ಕಾರ ಮಾಹಿತಿ ಕೊಡುವುದನ್ನೇ ಕಡಿಮೆ ಮಾಡಿದೆ. ಮೊದಲು ಪ್ರತಿದಿನ ಎರಡೆರಡು ಬಾರಿ ದೇಶದ ಕರೋನಾ ಪೀಡಿತರ ಸಂಖ್ಯೆ, ಕರೋನಾದಿಂದ ಸತ್ತವರ ಸಂಖ್ಯೆ, ಗುಣಮುಖರಾದವರ ಸಂಖ್ಯೆ, ಗಂಭೀರ ಸ್ಥಿತಿಯಲ್ಲಿರುವವರ ಸಂಖ್ಯೆ, ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಗಳೆಲ್ಲವನ್ನೂ ನೀಡುತ್ತಿತ್ತು. ಈಗ ಒಂದೇ ಬಾರಿ‌. ಅದೂ ಕೂಡ ಪ್ರಕಟಣೆಯ ಮೂಲಕ.‌

ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ದೇಶದ ಕರೋನಾ ಸೋಂಕು ಪೀಡಿತರ ಸಂಖ್ಯೆ ಈಗ ಮೇ.19ಕ್ಕೆ 1,01,139 ಆಗಿದೆ. ಇದರಲ್ಲಿ ಮೇ 16ರಿಂದ ಈಚೆಗೆ ದಿನವೊಂದರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ ಲಾಕ್ ಡೌನ್ ಸಡಿಲಗೊಳಿಸಿರುವುದರಿಂದ ಗಣನೀಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಗಮನಿಸಬೇಕಾಗಿದೆ.

ಈ ಹಿಂದೆ ಮೇ 10ರಂದು ಮಾತ್ರ 4,213 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದವು. ಲಾಕ್ಡೌನ್ ಇದ್ದಾಗಲೇ ಈ ರೀತಿ ಕರೋನಾ ಸೋಂಕು ವ್ಯಾಪಕವಾಗಿ ಹರಡಿದೆ. ಇನ್ನೀಗ ಪ್ರಯಾಣಿಕರ ರೈಲು ಸಂಚಾರ ಆರಂಭವಾಗಿದೆ. ಅಂತರ ರಾಜ್ಯ ಸಂಚಾರಕ್ಕೆ ಎಡೆ ಮಾಡಿಕೊಡಲಾಗಿದೆ. ಅಂತರ ರಾಜ್ಯ ಸಂಚಾರಕ್ಕೆ ಎಡೆ ಮಾಡಿಕೊಡುವುದರಿಂದ ಏನಾಗುತ್ತದೆ ಎಂಬುದಕ್ಕೆ ತಮಿಳುನಾಡು ಸೂಕ್ತ ಉದಾಹರಣೆ. ತಮಿಳುನಾಡಿನಲ್ಲಿ ಮೇ 18ರಂದು ಒಂದೇ ದಿನ 536 ಜನರಿಗೆ ಕರೋನಾ ಸೋಂಕು ಹರಡಿದೆ. ಆ ಪೈಕಿ 46 ಜನ ಮಹಾರಾಷ್ಟ್ರಕ್ಕೆ ಭೇಟಿಕೊಟ್ಟಿದ್ದವರು‌. ಮಹಾರಾಷ್ಟ್ರ, ಇಡೀ ದೇಶದಲ್ಲೇ ಅತಿಹೆಚ್ಚು‌, ಅಂದರೆ 36 ಸಾವಿರಕ್ಕೂ ಹೆಚ್ಚು ಕರೋನಾ ರೋಗಿಗಳಿರುವ ರಾಜ್ಯ.

ಕರೋನಾ ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಮೇ 6ರಿಂದಲೇ ದಿನವೊಂದಕ್ಕೆ 3 ಸಾವಿರಕ್ಕೂ ಹೆಚ್ಚು ಜನ ಕೊರೊನಾ ಸೋಂಕು ಪೀಡಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಮೇ 6ರಂದು 3,561 ಜನರಿಗೆ, ಮೇ 7ರಂದು 3,390 ಮಂದಿಗೆ, ಮೇ 8ರಂದು 3,320 ಜನರಿಗೆ ಮತ್ತುಮೇ 9 ರಂದು 3,277 ಜನರಿಗೆ, ಮೇ 10ರಂದು 4,213 ಜನರಿಗೆ, ಮೇ 11ರಂದು 3,064 ಮಂದಿಗೆ, ಮೇ 12 ರಂದು 3,525 ಜನರಿಗೆ, ಮೇ13ರಂದು 3,722 ಮಂದಿಗೆ ಹಾಗೂ ಮೇ 14ರಂದು 3,967 ಜನರಿಗೆ, ಮೇ 15ರಂದು 3,970 ಮಂದಿಗೆ, ಮೇ 16ರಂದು 4,987 ಜನರಿಗೆ, ಮೇ 17ರಂದು 5,242 ಮತ್ತು ಮೇ 18ರಂದು 4,970 ಹೊಸ ಪ್ರಕರಣಗಳು ಪತ್ತೆಯಾಗಿವೆ.

Exit mobile version