ಗದಗ: ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರೆ ಮರಳು ಗಣಿಗಾರಿಕೆಗೆ ಸಿಲುಕಿ ನರಳುವಂತಾಗಿದೆ. ನಿತ್ಯ ಲೆಕ್ಕವಿಲ್ಲದಷ್ಟು ತುಂಗಭದ್ರೆಯ ಒಡಲು ಬಗೆಯುತ್ತಿದ್ದರೂ ತುಂಗವ್ವಾ ಮರಳು ಗಣಿಗಳ್ಳರ ದಾಯಕ್ಕೆ ಅಸಹಾಯಕಳಾಗಿ ಮೈಯೊಡ್ಡಿದ್ದಾಳೆ. ತನ್ನನ್ನು ರಕ್ಷಿಸಬೇಕಾದವರೆ ಕಣ್ಣಿದ್ದು ಕುರುಡರಾದಾಗ ತಾನಾದರೂ ಏನು ಮಾಡಿಯಾಳು? ಎಂಬ ಕಾರಣಕ್ಕೆ ತನ್ನ ಮೇಲಿನ ಗಣಿಗಳ್ಳರ ದರ್ಪ ಹಾಗೂ ದಾಯಕ್ಕೆ ಮೌನಿಯಾಗಿದ್ದಾಳೆ. ಒಂದೆಡೆ ಕೊರೋನಾ ಬಗ್ಗೆ ಇಡೀ ಜಗತ್ತು ತಲೆಕೆಡಿಸಿಕೊಂಡಿದೆ. ಆದರೆ ಗದಗ ಜಿಲ್ಲೆಯಲ್ಲಿ ಜನ ಕೊರೋನಾ ಆತಂಕದಲ್ಲಿರುವಾಗಲೇ ಮತ್ತೊಂದೆಡೆ ಕೊರೋನಾ ನೆಪದಲ್ಲಿ ಮರಳಿನ ಕಮಾಯಿ ಜೋರಾಗಿ ನಡೆಯುತ್ತಿದೆ. ಸರ್ಕಾರದ ಯಾವುದೇ ನಿಯಮಗಳು ಇವರಿಗೆ ಅನ್ವಯಿಸುತ್ತಿಲ್ಲ, ಹೀಗಾಗಿ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯ ಅಂಧಾ ದರ್ಬಾರ್ ಜೋರಾಗಿದೆ.

ಗಾಳಿಗೆ ತೂರಿದ ನಿಯಮ..

ಜಿಲ್ಲೆಯಲ್ಲಿನ ಮರಳು ಮಾಫಿಯಾಗೆ ಮಾತ್ರ ಯಾವುದೇ ನಿಯಮಗಳು ಅನ್ವಯಿಸುವಂತೆ ಕಾಣುತ್ತಿಲ್ಲ. ಇವರು ಆಡಿದ್ದೇ ಆಟ ಎನ್ನುವಂತಾಗಿದೆ. ಈಗಾಗಲೇ ಮುಂಡರಗಿ ತಾಲೂಕಿನ ಶಿಂಗಟಾಲೂರು, ಶಿರನಹಳ್ಳಿ, ಕಕ್ಕೂರು, ಕೊರ್ಲಹಳ್ಳಿ, ನಾಗರಹಳ್ಳಿ ಸೇರಿದಂತೆ ಇತರೆಡೆ ಹಾಗೂ ಶಿರಹಟ್ಟಿ ತಾಲೂಕಿನ ಇಟಗಿ, ಸಾಸರವಾಡ, ತಂಗೊಡ ಸೇರಿದಂತೆ ಇತರೆಡೆ ಮರಳು ಗಣಿಗಾರಿಕೆ ಪಾಯಿಂಟ್ ಗಳಿವೆ. ಆದರೆ ಇವರಿಗೆ ಕನಿಷ್ಟ ನೆಲ ಜಲದ ಪರಿವೆಯೂ ಇಲ್ಲದೇ ನಿತ್ಯ ತುಂಗೆಯ ಒಡಲು ಬಗೆಯುತ್ತಿದ್ದಾರೆ. ಮುಖ್ಯವಾಗಿ ಗಣಿ ಇಲಾಖೆ ವ್ಯಾಪ್ತಿಯಲ್ಲಿಯೇ ಮರಳು ಗಣಿಗಾರಿಕೆಯೂ ಬರುವುದರಿಂದ ಗಣಿ ಇಲಾಖೆ ಸಚಿವರ ತವರಲ್ಲೆ ಗಣಿಗಾರಿಕೆಯ ಅಂದಾ ದರ್ಬಾರ ನಡೆದರೆ ಇನ್ನು ರಾಜ್ಯದ ಸ್ಥಿತಿ ಏನಾಗಿರಬೇಡ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುವಂತಾಗಿದೆ.

ತುಂಗಭದ್ರಾ ನದಿ ಒಡಲಲ್ಲಿ ದೊಡ್ಡ ರಸ್ತೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಮರಳು ಗಣಿಗಾರಿಕೆಗ ಎನ್ವಿರಾನ್ ಮೆಂಟಲ್ ಕ್ಲೇರೆನ್ಸ್ ಕೆಲವು ನಿಯಮಗಳನ್ನು ರೂಪಿಸಿದೆ. ಆದರೆ ಇಲ್ಲಿನ ಗಣಿ ಕುಳಗಳಿಗೆ ಮಾತ್ರ ಯಾವ ನಿಯಮಗಳು ಅನ್ವಯಿಸುವಂತೆ ಕಾಣುತ್ತಿಲ್ಲ. ನದಿಯಲ್ಲಿ ದೊಡ್ಡದೊಡ್ಡ ಗುಂಡಿಗಳನ್ನು ನಿರ್ಮಿಸಿ ಮರಳು ಸಂಗ್ರಹಿಸುತ್ತಿದ್ದಾರೆ. ಸರ್ಕಾರದ ನಿಯಮಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗುಂಡಿಗಳನ್ನು ನಿರ್ಮಿಸಿದರು ಇವರ ಆಟಾಟೋಪಗಳನ್ನು ಕಂಡು ಕಾಣದಂತೆ ಅಧಿಕಾರಿಗಳಿದ್ದಾರೆ ಎನ್ನುವುದು ಈ ಭಾಗದ ಜನರ ಆರೋಪ. ನದಿಯಲ್ಲಿ ಮೂರ್ನಾಲ್ಕು ಜೆಸಿಬಿ ಇಳಿಸಿ ಮರಳು ತೆಗೆಯುವುದು ಯಾವ ಗೈಡ್ ಲೈನ್ ನಲ್ಲಿದೆ ಎಂಬ ಪ್ರಶ್ನೆ ಉದ್ಭವಾಗಿದೆ. ಮುಖ್ಯವಾಗಿ ನದಿಯಲ್ಲಿ ಜೆಸಿಬಿ ಇಳಿಸುವುದರಿಂದ ನದಿ ನೀರು ಮಲೀನವಾಗುವ ಜೊತೆಗೆ ಜಲಚರಗಳ ಸ್ಥಿತಿ ಏನಾಗಬೇಡ ಎಂದು ಜೀವಪರ ಕಾಳಜಿಯ ಪ್ರತಿಯೊಬ್ಬರು ಪ್ರಶ್ನಿಸುತ್ತಿದ್ದಾರೆ. ನದಿಯಲ್ಲಿ ದೊಡ್ಡ ದೊಡ್ಡ ರಸ್ತೆ ನಿರ್ಮಿಸಿ ನದಿಯ ಒಳಗೂ ಟ್ರ್ಯಾಕ್ಟರ್ ಗಳು ಹೋಗಿ ಮರಳು ತುಂಬುತ್ತವೆ. ನದಿಯಲ್ಲಿ ರಸ್ತೆ ನಿರ್ಮಾಸಿ ಟ್ರ್ಯಾಕ್ಟರ್ ಮೂಲಕ ಮರಳು ಸಾಗಣಿಗೆ ಅವಕಾಶ ಕೊಟ್ಟವರು ಯಾರು ಎಂದು ಜನ ಪ್ರಶ್ನಿಸುವಂತಾಗಿದೆ.

ಇನ್ನು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ದೊರೆಯಬೇಕು ಎನ್ನುವ ಉದ್ದೇಶದಿಂದ ಯೋಜನೆಯೊಂದನ್ನು ರೂಪಿಸಿ ಮರಳು ಮಾರಾಟದ ಗುತ್ತಿಗೆ ನೀಡಲಾಯಿತು. ಆದರೆ ಇದರಿಂದ ಜನಸಾಮಾನ್ಯರಿಗಿಂತಲೂ ಗುತ್ತಿಗೆದಾರರ ಬೊಕ್ಕಸ ತುಂಬುತ್ತಿದೆಯೇ ಹೊರತು ಜನಸಾಮಾನ್ಯರದ್ದಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರದ ಬೊಕ್ಕಸಕ್ಕೂ ಇದರಿಂದ ಪಂಗನಾಮವೇ ಸರಿ. ಜಿಲ್ಲಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾವಹಿಸಿದ್ದರು. ಆದರೆ ಕೊರೋನಾದಂತಹ ಈ ಪರಿಸ್ಥಿತಿಯನ್ನು ಅರಿತ ಗಣಿಕುಳಗಳು ಸದ್ದಿಲ್ಲದೇ ತಮ್ಮ ಅಕ್ರಮ ಕಮಾಯಿಯಲ್ಲಿ ತೊಡಗಿವೆ. ಇನ್ನು ಇದರಲ್ಲಿ ಮುಂಡರಗಿ ತಹಶೀಲ್ದಾರ್ ವೆಂಕಟೇಶ್ ನಾಯಕ್ ಅವರ ಪಾತ್ರವೇನು? ಎಂದು ಜನ ಪ್ರಶ್ನಿಸುವಂತಾಗಿದೆ. ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ದರೂ ತಹಶೀಲ್ದಾರರು ಮಾತ್ರ ಕಣ್ಣಿದ್ದು ಕುರುಡರಾಗಿದ್ದಾರೆ ಎನ್ನುವುದು ಜನರ ಆಕ್ರೋಶವೂ ಆಗಿದೆ. ಈ ಬಗ್ಗೆ ಪ್ರತಿಕ್ರಿಯೇ ಪಡೆಯಲು ಮುಂಡರಗಿ ತಹಶೀಲ್ದಾರ್ ವೆಂಕಟೇಶ್ ನಾಯಕ ಅವರನ್ನು ಉತ್ತರಪ್ರಭ ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ತಹಶೀಲ್ದಾರ್ ನಾಯಕ್ ಅವರು ಮಾತ್ರ ಕರೆ ಸ್ವೀಕರಿಸಲಿಲ್ಲ.

ಅಧಿಕಾರಿಗಳು ತುಂಗಭದ್ರೆಯ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಯ ನೆಪದಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಗಟ್ಟಬೇಕು, ಇಲ್ಲದಿದ್ದರೇ ನದಿ ದಡದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ ಅಂತಾ ರೈತಪರ ಹೋರಾಟಗಾರ ವಿಠಲ್ ಗಣಾಚಾರಿ.   

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಾಳಜಿ ತೋರಬೇಕಿದೆ, ಮರಳು ಗಣಿಗಾರಿಕೆ ಬಗ್ಗೆ ಮೌನವಹಿಸಿರುವ ಅಧಿಕಾರಿಗಳನ್ನು ಗಣಿ ಇಲಾಖೆ ಸಚಿವರು ಎಚ್ಚರಿಸುವ ಅವಶ್ಯಕತೆ ಇದೆ ಅಂತಾರೆ ಜಿಲ್ಲೆಯ ಜನ.

Leave a Reply

Your email address will not be published. Required fields are marked *

You May Also Like

ಟಿಕ್ ಟಾಕ್ ಬ್ಯಾನ್ ಗೆ ಆಗ್ರಹಿಸಿ ಮುಂಡರಗಿಯಲ್ಲಿ ಪ್ರತಿಭಟನೆ

ಚೀನಿ ಆಪ್ ಟಿಕ್ ಟಾಕ್ ನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ಮುಂಡರಗಿಯಲ್ಲಿಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ವಿಶ್ವ ಸಂಸ್ಥೆ ಭದ್ರತಾ ಸಮಿತಿಗೆ ಭಾರತ ತಾತ್ಕಾಲಿಕ‌ ಸದಸ್ಯ

ನ್ಯೂಯಾರ್ಕ್‌: ಚೀನಾದೊಂದಿಗೆ ಗಡಿಯಲ್ಲಿ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲಿಯೇ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ತಾತ್ಕಾಲಿಕ ಸದಸ್ಯತ್ವ…

ರಾಜ್ಯದಲ್ಲಿಂದು 178 ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ಇಂದು ರಾಜ್ಯದಲ್ಲಿ ಮತ್ತೆ 178 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು…