ಬೆಂಗಳೂರು: ಬಿಕಾಂ ಪದವಿ ಮುಗಿಸಿ ಬ್ಯಾಂಕ್ ಒಂದರ ಉದ್ಯೋಗಿಯಾಗಿ ನಂತರ ಭೂಗತ ಲೋಕವನ್ನಾಳಿದ ವ್ಯಕ್ತಿಯ ಕಥೆಯಿದು. ಸದ್ಯ ಭೂಗತ ಲೋಕದಿಂದ ನಿವೃತ್ತಿ ಹೊಂದಿದರೂ ಕೂಡ ಮುತ್ತಪ್ಪ ರೈ ಹೆಸರು ಮಾತ್ರ ಚಾಲ್ತಿಯಲ್ಲಿಯೇ ಇತ್ತು. ಮಾಜಿ ಡಾನ್ ಮುತ್ತಪ್ಪ ರೈ ಜೀವನದಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳ ಮೆಲಕು ಇಲ್ಲಿದೆ ನೋಡಿ..

ಪುತ್ತೂರಿನ ಕಯ್ಯೂರು ಗ್ರಾಮದ ನೆಟ್ಟಲಾ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿ ಪುತ್ರ ಮುತ್ತಪ್ಪ ರೈ. ಇವರ ಪತ್ನಿ ರೇಖಾ 2013ರಲ್ಲಿ ನಿಧನರಾಗಿದ್ದರು. ರೈಗೆ ಇಬ್ಬರು ಗಂಡು ಮಕ್ಕಳು ರಾಖಿ ಮತ್ತು ರಿಕ್ಕಿ. ರೈ ಹಿರಿಯ ಪುತ್ರ ಕೆನಡಾದಲ್ಲಿ ವಾಸ್ತವ್ಯ ಹೂಡಿದ್ದು, ಲಾಕ್ ಡೌನ್ ನಿಂದಾಗಿ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇನ್ನು 2ನೇ ಪುತ್ರ ರಿಕ್ಕಿ ತಂದೆ ಜತೆಗೆ ಇದ್ದಾರೆ.

ಮುತ್ತಪ್ಪ ರೈ

ರೈ ಎದೆ ಸೀಳಿದ್ದವು 5 ಗುಂಡು ಆದರೂ…

ಮುತ್ತಪ್ಪ ರೈಗೆ 1993 ರಲ್ಲಿ ಕೋರ್ಟ್ ಆವರಣದಲ್ಲಿ ವಕೀಲರ ವೇಷದಲ್ಲಿ ಬಂದ ವ್ಯಕ್ತಿಯೊಬ್ಬನಿಂದ 5 ಗುಂಡು ಬಿದಿದ್ದವು. ಬಿದ್ದ ಗುಂಡು ರೈ ಎರಡು ಕೈ, ತೊಡೆ ಹಾಗೂ ಎದೆ ಸೀಳಿದ್ದವು. ಆದರೆ ಅಷ್ಟಾದರೂ ರೈ ಪ್ರಜ್ಞೆ ತಪ್ಪಿರಲಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸ್ವತಃ ವೈದ್ಯರೆ ಇನ್ನು ಐದು ನಿಮಿಷದಲ್ಲಿ ಜೀವ ಹೋಗುತ್ತೆ ಎಂದು ಹೇಳಿದ್ದರಂತೆ. ಆದರೆ 45 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ನಂತರ ರೈ ಗುಣಮುಖ ಆಗತೊಡಗಿದರು. ಘಟನೆ ನಡೆದ ನಂತರ ರೈ ಬದುಕಿದ್ದು 27 ವರ್ಷ. ಇದು ಪವಾಡ ಸದೃಶವೆ ಸರಿ. ಈ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳಲು ಮುತ್ತಪ್ಪ ರೈ ಅವರಿಗೆ ಎರಡು ವರ್ಷ ಬೇಕಾಯಿತು. ಮುಖ್ಯವಾಗಿ ತಮ್ಮ ಮೇಲೆ ಗುಂಡಿನ ದಾಳಿ ನಡೆಯುತ್ತೆ ಎನ್ನುವುದು ಗೊತ್ತಿದ್ದು ಅಂದು ಆಗಿದ್ದಾಗಲಿ ಎಂದು ಕೋರ್ಟ್ ಗೆ ಹೋಗಿದ್ದರು ಮುತ್ತಪ್ಪ ರೈ. ತಮ್ಮ ಮೇಲೆ ದಾಳಿ ನಡೆಯುವ ಐದು ತಾಸಿಗೂ ಮೊದಲೇ ಈ ಬಗ್ಗೆ ಗೊತ್ತಾಗಿತ್ತಂತೆ. ತಮ್ಮ ಜೊತೆಗೆ ಬಂದಿದ್ದ ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದರಂತೆ. ಇದು ರೈ ಅವರಲ್ಲಿನ ದೂರದೃಷ್ಟಿ. ನಂತರ ಗುಂಡಿನ ದಾಳಿಯಿಂದ ಚೇತರಿಸಿಕೊಂಡು ಮುಂಬೈಗೆ ಹಾರಿದರು.

ಮುತ್ತಪ್ಪ ರೈ ಹಿನ್ನೆಲೆ

ಬಿಕಾಂ ಪದವೀಧರ ಮುತ್ತಪ್ಪ ರೈ ಆರಂಭದಲ್ಲಿ ವಿಜಯ ಬ್ಯಾಂಕ್ ಉದ್ಯೋಗಿ. ನಂತರ ಭೂಗತಲೋಕಕ್ಕೆ ಕಾಲಿಟ್ಟಿದ್ದ ರೈ 1970-80ರ ದಶಕದಲ್ಲಿ ಭೂಗತ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರು. ರೈ ಹಾಗೂ ಸಹಚರರು ಅಂದಿನ ಕುಖ್ಯಾತ ಡಾನ್ ಜಯರಾಜ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಆರೋಪವೂ ಇತ್ತು. ಬಳಿಕ ಮುತ್ತಪ್ಪ ರೈ ಹತ್ಯೆಗೆ ಸಂಚು ನಡೆಯುತ್ತಿತ್ತು ಎಂಬ ಸುದ್ದಿಯಿಂದ ಭಾರತ ಬಿಟ್ಟು ದುಬೈಗೆ ರೈ ಶಿಫ್ಟ್ ಆಗಿದ್ದರು.

ದುಬೈನಲ್ಲಿ ಎಂ.ಎನ್.ರೈ..

ದುಬೈನಲ್ಲಿ ಸಾಫ್ಟ್ ವೇರ್ ಕಂಪನಿಯೊಂದನ್ನು ಮುತ್ತಪ್ಪ ರೈ ಆರಂಭಿಸಿದರು. ಎಲ್ಲಿ ಎಂ.ಎನ್.ರೈ ಎಂದು ಮುತ್ತಪ್ಪ ರೈ ಪರಿಚಿತರಾಗಿದ್ದರು. ದುಬೈನಲ್ಲೇ ಕುಳಿತು ಭೂಗತ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ರೈಯನ್ನು ರಿಯಲ್ ಎಸ್ಟೇಟ್ ನ ಸುಬ್ಬಾರಾಜು ಕೊಲೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ರೈ ವಿರುದ್ಧ ವಾರಂಟ್ ಜಾರಿಗೊಳಿಸಿದ್ದರು. ಒಟ್ಟು ರೈ ವಿರುದ್ಧ ಎಂಟು ಪ್ರಕರಣಗಳಿದ್ದವು. ಕೊನೆಗೆ 2002ರಲ್ಲಿ ಮುತ್ತಪ್ಪ ರೈಯನ್ನು ದುಬೈ ಪೊಲೀಸರು ಯುಎಇನಿಂದ ಭಾರತಕ್ಕೆ ಗಡಿಪಾರು ಮಾಡಿದ್ದರು. ಅಂದು ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿದ್ದ ಎಚ್.ಟಿ.ಸಾಂಗ್ಲಿಯಾನಾ ರೈಯನ್ನು ದುಬೈನಲ್ಲಿ ಬಂಧಿಸಿ ಭಾರತಕ್ಕೆ ಕರೆ ತಂದಿದ್ದರು. ರೈ ವಿರುದ್ಧದ ವಸೂಲಿ, ಕೊಲೆ ಆರೋಪಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರ ಇಲ್ಲದ ಹಿನ್ನೆಲೆಯಲ್ಲಿ ಕೋರ್ಟ್ ರೈಯನ್ನು ಖುಲಾಸೆಗೊಳಿಸಿತ್ತು. ನಂತರ ಜಯ
ಕರ್ನಾಟಕ ಸಂಘಟನೆಯನ್ನು ಸ್ಥಾಪಿಸಿದ್ದ ಮುತ್ತಪ್ಪ ರೈ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಇದಿಷ್ಟು ಮುತ್ತಪ್ಪ ರೈ ಅವರ ಲೈಫ್ ಟ್ರಾವೆಲ್ ನ ಹೈಲೆಟ್ಸ್.

ಮುತ್ತಪ್ಪ ರೈ ಅವರಿಗೆ ಸಹಾಯ ಮಾಡಿದ್ದರಂತೆ ವಾಜಪೇಯಿ, ಅಡ್ವಾಣಿ

ದುಬೈನಿಂದ ಮುತ್ತಪ್ಪ ರೈ ಅವರನ್ನು ಬಂಧಿಸಿ ಕರೆದುಕೊಂಡು ಬಂದಿದ್ದ ಸಾಂಗ್ಲಿಯಾನಾ. ಇನ್ನು ಒಂದು ಸಂದರ್ಭದಲ್ಲಿ ಮುತ್ತಪ್ಪ ರೈ ಅವರಿಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಸಹಾಯ ಮಾಡಿದ್ದರು. ಆದರೆ ಅವರು ಸಹಾಯ ಮಾಡಲು ಮುತ್ತಪ್ಪ ರೈ ಒಬ್ಬ ಡಾನ್ ಎನ್ನುವ ಕಾರಣಕ್ಕಲ್ಲ. ಬದಲಾಗಿ ಅವರು ದುಬೈನಲ್ಲಿದ್ದು ದೇಶಕ್ಕೆ ಬೇಕಾದ ಮಾಹಿತಿ ನೀಡುತ್ತಿದ್ದರು ಎನ್ನುವ ಕಾರಣಕ್ಕೆ ಎಂಬ ಮಾತುಗಳನ್ನು ಖಾಸಗಿ ವಾಹಿಯ ಸಂದರ್ಶನವೊಂದರಲ್ಲಿ ರೈ ಹೇಳಿಕೊಂಡಿದ್ದರು.

ರೌಡಿ ಆಗಲೇಬೇಕು ಎಂದು ಫೊಲ್ಡ್ ಗೆ ಬಂದಿದ್ದರು ರೈ..

ರೌಡಿ ಆಗಬೇಕು ಅಂತಲೇ ಫಿಲ್ಡ್ ಗೆ ಬಂದವರು ಮುತ್ತಪ್ಪ ರೈ, ರೌಡಿಸಂನಲ್ಲಿ ಹೆಸರು ಸಂಪಾದಿಸಬೇಕು ಎನ್ನುವ ಬಯಕೆ ಅವರದ್ದಾಗಿತ್ತು. ಸಾಕಷ್ಟು ಕೊಲೆ ಹಾಗೂ ಬೆದರಿಕೆ ಕೇಸ್ ಗಳಲ್ಲಿ ರೈ ಭಾಗಿಯಾಗಿದ್ದರೂ ಪುರಾವೆಗಳಿಲ್ಲದೇ ಬಿಡುಗಡೆಯಾಗಿದ್ದರು. ತುಳು ನಾಡಿನ ರೈ ಕಾಂಚೀಲ್ಡಾ ಎನ್ನುವ ತುಳು ಸಿನಿಮಾದಲ್ಲೂ ನಟಿಸಿದ್ದರು. ಪತ್ನಿ ರೇಖಾ ಅನಾರೋಗ್ಯ ಕಾರಣದಿಂದ 2013ರಲ್ಲಿ ನಿಧನರಾದರು. ವಿದೇಶಲ್ಲಿದ್ದ ಮುತ್ತಪ್ಪ ರೈ ಅವರನ್ನು 2002ರಲ್ಲಿ ಅಲ್ಲಿಂಗ ಗಡಿಪಾರು ಮಾಡಲಾಯಿತು. ನಂತರ ರೈ ಚಿತ್ರ ಕಥೆಗೆ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಸಿನಿಮಾ ರಿಲೀಸ್ ಗೆ ಮುಂದಾಗಿದ್ದರು. ಸದ್ಯ ಹಾಗೆಯೇ ಉಳಿದಿದೆ.

ಟಿವಿ ಚಾನಲ್ ಗಳ ಟಿಆರ್ಪಿ ಬಗ್ಗೆ ಅಸಮಾಧಾನ…

ನಾನು ಇದುವರೆಗೆ ಎರಡು ಲಕ್ಷ ಮರಗಳನ್ನು ನೆಟ್ಟಿದ್ದೇನೆ. ಮಂಡ್ಯದ ತೊನ್ನೂರಿನಲ್ಲಿ ಕೆರೆಯೊಂದನ್ನು ಅಭಿವೃದ್ಧಿಪಡಿಸಿದ್ದೇನೆ. ಕೆಆರ್‌ಎಸ್‌ನ ನೀರು ಖಾಲಿಯಾದರೂ, ತೊನ್ನೂರು ಕೆರೆಯ ನೀರು ಖಾಲಿಯಾಗುವುದಿಲ್ಲ. ರಾಯಚೂರಿನ ಪ್ರತೀ ಹಳ್ಳಿಗೆ ಹೋಗಿ ಮನೆ ಮನೆಗೆ ಕುಡಿಯುವ ನೀರು ಕೊಡುವ ಯೋಚನೆ ಮಾಡಿದ್ದೇವೆ. ಆದರೆ ಇಂಥದ್ದನ್ನು ಯಾವ ಟಿವಿ ಚಾನಲ್ ನವರು ಹಾಕುವುದಿಲ್ಲ.  ಒಬ್ಬನಿಗೆ ಯಾರಾದ್ರೂ ಚಪ್ಪಲಿಯಲ್ಲಿ ಹೊಡೆದರೆ ನೀವು ಅದನ್ನು ಬೆಳಗ್ಗೆಯಿಂದ ಸಂಜೆಯವರೆಗೆ ತೋರಿಸುತ್ತೀರಾ. ಯಾವುದೂ ಸಿಗದಿದ್ದರೆ ಯಾವುದೋ ಒಬ್ಬ ಸ್ವಾಮೀಜಿಯನ್ನು ಹಿಡಿದು ತರುತ್ತೀರಾ. ವಾರಕ್ಕೊಮ್ಮೆ ಬರುವ ಟಿಆರ್ಪಿಗಾಗಿ ಪಾಪ ಟಿವಿ ಚಾನೆಲ್‌ಗಳವರು ಪಡುವ ಕಷ್ಟ ನೋಡಿದರೆ ಅಯ್ಯೋ ಅನ್ನಿಸತ್ತೆ. ಒಳ್ಳೆಯ ಕೆಲಸಗಳನ್ನು ತೋರಿಸುವುದಿಲ್ಲ. ಈ ಟಿಆರ್‌ಪಿ ಅನ್ನೋದು ಮೊದಲು ಬ್ಯಾನ್ ಆಗ್ಬೇಕು ಎಂದು ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿದ್ದರು.

ಮಹಾದಾಯಿ ಬಗ್ಗೆ ರೈ ಖಡಕ್ ಎಚ್ಚರಿಕೆ..!

ಸರಕಾರಿ ಅಧಿಕಾರಿಗಳು ಇರುವುದು ಜನರ ಸೇವೆ ಮಾಡೋದಕ್ಕೆ. ಅವರ ಮನೆಗಳಲ್ಲಿ ನೀರು ಯಾವಾಗಲೂ ಬರುತ್ತೆ. ನಮಗೆ ನೀರು ಬೇಕಾದರೆ ನಾವು ಏನ್ ಮಾಡ್ಬೇಕು, ಅವರ ಮನೆಗಳಿಗೆ ನುಗ್ಗಬೇಕು ತಾನೆ? ಅವರಿಗೇನು ಹೊಡೆಯೋಕೆ ಬಡಿಯೋಕೆ ನುಗ್ಗುವುದಿಲ್ಲ. ನೀರಿಗಾಗಿ ಅಷ್ಟೇ. ಲಕ್ಷೋಪ ಲಕ್ಷ ಜನ ಈ ರೀತಿ ಅಧಿಕಾರಿಗಳ ನುಗ್ಗುತ್ತಾರೆ ಅಷ್ಟೇ. ಕೃಷಿಯೇ ನಮ್ಮ ಜನರ ಮೂಲ, ಅದೇ ಸತ್ತು ಹೋದರೆ ಜನ ಊಟಕ್ಕೆ ಏನು ಮಾಡ್ತಾರೆ. ಎಲ್ಲಿ ಊಟ ಇದೆಯೋ ಅಲ್ಲಿಗೆ ನುಗ್ತಾರೆ. ಶ್ರೀಮಂತರ ಮನೆಗೆ ನುಗ್ಗಲು ಇನ್ನೆಷ್ಟು ಸಮಯ ಬಾಕಿ ಇದೆ, ಜನಸಾಮಾನ್ಯರು ರಾಜಕಾರಣಿಗಳ ಕಾಲರ್ ಹಿಡಿದು ಎಳೆಯೋದಕ್ಕೆ ತುಂಬ ಸಮಯ ಏನಿಲ್ಲ. ಆದ್ದರಿಂದ ರೈತರ ಬೇಡಿಕೆಯನ್ನು ಈಗಲೇ ಒಪ್ಪಿಕೊಂಡು ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮುತ್ತಪ್ಪ ರೈ ಆಡಳಿತ ವರ್ಗಕ್ಕೆ ಖಡಕ್ ಎಚ್ಚರಿಕೆ ನೀಡಿದ್ದರು.

Leave a Reply

Your email address will not be published. Required fields are marked *

You May Also Like

ಚೀನಾ ಕುತಂತ್ರ – ಸರ್ವ ಪಕ್ಷಗಳ ಸಭೆ ಕರೆದ ಪ್ರಧಾನಿ!

ಹೊಸದೆಹಲಿ: ಗಡಿಯಲ್ಲಿ ಚೀನಾ ಕಿರಿಕ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷಗಳ ಸಭೆ…

ಗದಗ ಜಿಲ್ಲೆಯಲ್ಲಿ ಊರೂರು ವ್ಯಾಪಿಸುತ್ತಿರುವ ವೈರಸ್: ಯಾವ ಊರಲ್ಲಿ ಎಷ್ಟು?

ಗದಗ: ಜಿಲ್ಲೆಯಲ್ಲಿ ಶುಕ್ರವಾರ ದಿ. 17 ರಂದು 60(ಹೆಲ್ಥ್ ಬುಲೆಟಿನ್ ನಲ್ಲಿ 59) ಜನರಿಗೆ ಕೊವಿಡ್-19…

ಹದಗೆಟ್ಟ ಸೊರಟೂರ – ಮುಳಗುಂದ ರಸ್ತೆ: ದಶಕ ಗತಿಸಿದರೂ ದುರಸ್ಥಿ ಭಾಗ್ಯ ಕಾಣದ ರಸ್ತೆ!

ಮುಳಗುಂದ: ಸಮೀಪದ ಸೊರಟೂರ ಗ್ರಾಮದಿಂದ ಮುಳಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದ್ದು ದುರಸ್ಥಿ ಕಾಮಗಾರಿ ಕೈಗೊಳ್ಳಬೇಕಿದೆ.

ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಅಖಂಡ ಕರ್ನಾಟಕ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಗಜೇಂದ್ರಗಡ ಹಾಗೂ ರೋಣ ತಾಲೂಕಾ ಗೊಲ್ಲ ಸಮಾಜ ಬಾಂಧವರು ಪಟ್ಟಣದ ತಹಶೀಲ್ದಾರ ಮೂಲಕ ಸೋಮವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.