ಅರಣ್ಯಗಳ ಅಂಚಿನಲ್ಲಿ 650 ಕಿ.ಮೀ ರೈಲ್ವೆ ಬ್ಯಾರಿಕೇಡ್ ಹಾಕುವ ಗುರಿ : ಅರಣ್ಯ ಸಚಿವ ಆನಂದ್ ಸಿಂಗ್

ಚಾಮರಾಜನಗರ: ಕಾಡಂಚಿನ ಗ್ರಾಮಗಳಲ್ಲಿ ಪದೆ ಪದೇ ಜಾನುವಾರಗಳ ಮೇಲೆ ಹುಲಿ ದಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂದು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಪರಿಶೀಲಿಸಿದರು.

ಕುಂದಕೆರೆ ಅರಣ್ಯ ವಲಯಕ್ಕೆ ಭೇಟಿ ನೀಡಿದ ಸಚಿವ ಆನಂದ್ ಸಿಂಗ್, ಕಾಡಂಚಿನ ಗ್ರಾಮಗಳ ರೈತರು ಹಾಗೂ ಅರಣ್ಯಾಧಿಕಾರಿಗಳಿಂದ ಜಾನುವಾರುಗಳ ಮೇಲಿನ‌ ಹುಲಿ ದಾಳಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆನಂದ್ ಸಿಂಗ್, ಕಾಡಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಲು ಚರ್ಚೆ ನಡೆಸಲಾಗಿತ್ತು. ಅಷ್ಟರಲ್ಲೇ ಕೊರೊನಾ ಬಂತು. ಹಾಗಾಗಿ ಅದು ನೆನಗುದಿಗೆ ಬಿದ್ದಿದೆ. ಬಂಡೀಪುರದ 40 ಕಿ.ಮೀ ಸೇರಿದಂತೆ ರಾಜ್ಯದ ಅರಣ್ಯಗಳ ಅಂಚಿನಲ್ಲಿ 650 ಕಿ.ಮೀ ರೈಲ್ವೆ ಬ್ಯಾರಿಕೇಡ್ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 100 ಕೋಟಿ ಅನುದಾನ ಸಹ ಇದೆ ಎಂದು ತಿಳಿಸಿದರು.

ಕುಂದುಕೆರೆ ವಲಯದಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ಮನುಷ್ಯರ ಮೇಲೆ ಹುಲಿ ದಾಳಿ ನಡೆಸುವ ಸಾದ್ಯತೆ ಇದೆ. ಹುಲಿಸೆರೆಗೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾಡು ಪ್ರಾಣಿಗಳ ದಾಳಿಯಿಂದ ಹಸು ಸತ್ತರೆ 10 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ತಳಿ ಆಧಾರದ ಮೇಲೆ ಪರಿಹಾರ ಹೆಚ್ಚಳಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ರಾಜ್ಯದಲ್ಲಿ ಸಾಕು ಪ್ರಾಣಿಗಳಲ್ಲಾಗಲಿ ಅಥವಾ ಕಾಡು ಪ್ರಾಣಿಗಳಲ್ಲಾಗಲಿ ಕೊರೊನ ಕಂಡು ಬಂದಿಲ್ಲ. ಪ್ರಾಣಿಗಳಿಗೆ ಕೊರೊನಾ ತಗುಲದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ತಿಳಿಸಿದರು.

Exit mobile version