ಕೋರ್ಟ್ ಸೂಚನೆ ಪಾಲಿಸದಿದ್ದರೆ ಶಿಕ್ಷೆ!

ಬೆಂಗಳೂರು: ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಮೇಲ್ವಿಚಾರಣ ಸಮಿತಿ ನೀಡಿರುವ ಸಲಹೆ ಮತ್ತು ಸೂಚನೆಗಳನ್ನು ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮ ಜರಗಿಸಲಾಗುವುದು ಎಂದು ಕೋರ್ಟ್‌ ಸಿಬಂದಿಗೆ ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರ ಆದೇಶದ ಮೇರೆಗೆ ರಿಜಿಸ್ಟ್ರಾರ್‌ ಜನರಲ್‌ ರಾಜೇಂದ್ರ ಬದಾಮಿಕರ್‌ ಈ ಸೂಚನೆ ಹೊರಡಿಸಿದ್ದಾರೆ.

ಏ. 21ರಂದು ಕೊರೊನಾಗೆ ಸಂಬಂಧಿಸಿದ ಸಲಹೆ ಮತ್ತು ಸೂಚನೆಗಳ ಕುರಿತು ಹೈಕೋರ್ಟ್ ಸೂಚನೆ ಹೊರಡಿಸಿತ್ತು. ಈ ಸಲಹೆ, ಸೂಚನೆಗಳನ್ನು ಹೈಕೋರ್ಟ್‌ ಸಹಿತ ರಾಜ್ಯದ ಎಲ್ಲ ನ್ಯಾಯಾಲಯಗಳ ಅಧಿಕಾರಿಗಳು ಮತ್ತು ಸಿಬಂದಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಗಿತ್ತು.

ಈಗ ಮತ್ತೊಂದು ಸುತ್ತೋಲೆ ಹೊರಡಿಸಿರುವ ಹೈಕೋರ್ಟ್‌ ಈ ಹಿಂದೆ ತಿಳಿಸಿರುವ ಸೂಚನೆಗಳನ್ನು ಅಧಿಕಾರಿಗಳು ಅಥವಾ ಸಿಬಂದಿ ಉಲ್ಲಂಘಿಸಿದರೆ ಅದನ್ನು ಸೇವಾ ದುರ್ನಡತೆ ಎಂದು ಪರಿಗಣಿಸಿ ಕಾನೂನು ರೀತಿ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದೆ.

Exit mobile version