ಬೆಂಗಳೂರು : ಇಲ್ಲಿಯ ಹೊಂಗಸಂದ್ರದಲ್ಲಿನ ಮತ್ತೆ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬಿಹಾರಿ ಕೂಲಿ ಕಾರ್ಮಿಕನಿಂದ 29 ಜನರಿಗೆ ಸೋಂಕು ಹರಡಿತ್ತು. ಕೆಲವು ದಿನಗಳ ನಂತರ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಹೊಂಗಸಂದ್ರ ಸಹಜ ಸ್ಥಿತಿಯತ್ತ ಸಾಗುತ್ತಿದೆ ಎನ್ನುವಷ್ಟರಲ್ಲಿಯೇ ಕ್ವಾರಂಟೈನ್ ಮಾಡಿದ್ದವರಲ್ಲಿ ಬರೋಬ್ಬರಿ ಐದು ಜನರಿಗೆ ಸೊಂಕು ಪತ್ತೆಯಾಗಿದೆ. ಇದರಿಂದ ಮತ್ತೆ ಹೊಂಗಸಂದ್ರದಲ್ಲಿ ಭೀತಿ ಎದುರಾಗಿದೆ.
ಬಿಹಾರಿ ಕೂಲಿ ಕಾರ್ಮಿಕನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 184 ಜನರನ್ನು ಹೊಟೇಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇವರನ್ನು 14 ದಿನಗಳು ಕ್ವಾರಂಟೈನ್ ಮುಗಿದ ನಂತರ ಮತ್ತೆ ಟೆಸ್ಟ್ ಗೆ ಒಳಪಡಿಸಿದ್ದಾರೆ. ಈ ಟೆಸ್ಟ್ ನಲ್ಲಿ ಐವರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕು ಪತ್ತೆಯಾದ ಐದು ಜನರಲ್ಲಿ ಒಬ್ಬರು ಅಲ್ಲಿನ ಸ್ಥಳೀಯರು, ಮೂವರು ಕೂಲಿ ಕಾರ್ಮಿಕರು ಮತ್ತು ಒಬ್ಬರು ಕನ್ನಡಿಗರಿದ್ದಾರೆ. ಸದ್ಯ ಇವರ ಸಂಪರ್ಕದಲ್ಲಿರುವ ಜನರನ್ನು ಪತ್ತೆ ಹಚ್ಚಿ ಟೆಸ್ಟ್ ಗೆ ಒಳಪಡಿಸುವ ಸಾಧ್ಯತೆ ಇದೆ.
