ಇನ್ನೂ ತಪ್ಪುತ್ತಿಲ್ಲ ವಲಸಿಗರ ಪರದಾಟ..! ಅಂತರ್ ಜಿಲ್ಲಾ, ರಾಜ್ಯ ತಲುಪಲು ಹರಸಾಹಸ!

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ದುಡಿಮೆ ಅರಸಿ ಹೋದ ಕಾರ್ಸಿಮಿಕರು ವಿವಿದೆಡೆ ಸಿಲುಕಿದ್ದಾರೆ. ಹೀಗಾಗಿ ಸಿಲುಕಿ ಹಾಕಿಕೊಂಡಿರುವ ಜನರು ಮನೆಗೆ ತೆರಳಬೇಕೆಂಬ ಅಭಿಲಾಷೆ ಹೊಂದಿದ್ದಾರೆ. ಆದರೆ, ಅವರ ಗೋಳಾಟ ಮಾತ್ರ ಇನ್ನೂ ತಪ್ಪುತ್ತಿಲ್ಲ.

ಮೆಜೆಸ್ಟಿಕ್‌ ಸೇರಿದಂತೆ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಜನರು ಭಾನುವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಅಲ್ಲದೇ, ಬಸ್ ದರ ಹೆಚ್ಚಳ ಸೇರಿದಂತೆ ಬಸ್ ನ ಸೌಕರ್ಯ ಕಡಿಮೆ ಇರುವುದರಿಂದಾಗಿ ಜನರು ಗೋಳಾಡುತ್ತಿದ್ದಾರೆ. ಕಾರ್ಮಿಕರಿಗೆ ಅಭಯ ನೀಡಿದ್ದ ಸರ್ಕಾರ ತಮ್ಮ ಊರುಗಳಿಗೆ ತೆರಳಲು ಸಮರ್ಪಕ ಸೌಲಭ್ಯವನ್ನು ಕಲ್ಪಿಸಿಲ್ಲ. ಈಗಾಗಲೇ ಉದ್ಯೋಗವಿಲ್ಲದೆ ಕಂಗಾಲಾಗಿರುವ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ದುಪ್ಪಟ್ಟು ಹಣ ನೀಡಬೇಕಾದ ಅನಿವಾರ್ಯತೆ ಹೊಂದಿದ್ದಾರೆ.

ಇಂದು ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ 100 ಬಸ್‌ಗಳು ಹೊರಡಲಿವೆ. ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ಬಸ್‌ ಸಂಚಾರವಿದೆ. ಇನ್ನು ಹೊರರಾಜ್ಯದ ಕಾರ್ಮಿಕರಿಗೆ ರೈಲ್ವೇ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿದ್ದರೂ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಬೇರೆ ರಾಜ್ಯದ ಕಾರ್ಮಿಕರು ಕೂಡ ಆತಂಕದಲ್ಲಿ ಇದ್ದಾರೆ. ಅಲ್ಲದೇ, ಹೊರ ರಾಜ್ಯ ಸೇರಿದಂತೆ ಅಂತರ್ ಜಿಲ್ಲಾ ಸಂಚಾರಕ್ಕೆ ಪಾಸ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿರುವ ಸರ್ಕಾರ ಗೊಂದಲ ಸೃಷ್ಟಿಸಿದೆ.

ಸಾಮಾಜಿಕ ಜಾಲತಾಣದಲ್ಲಿಯೂ ಸರ್ಕಾರದ ನಡೆಯ ವಿರುದ್ಧ಻ಸಮಾಧಾನ ವ್ಯಕ್ತವಾಗುತ್ತಿವೆ. ಕೇರಳದಲ್ಲಿ ಅಂತರಾಜ್ಯದ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಪ್ರಯಾಣಿಸಲು ಉಚಿತ ಬಸ್‌ ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೆ ಅವರಿಗೆ ಊಟ ತಿಂಡಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಆ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿವೆ.

ಎಲ್ಲದಕ್ಕಿಂತಲೂ ಹೆಚ್ಚಾಗಿ ಯಾವುದೇ ಸಾಮಾಜಿಕ ಅಂತರ ಕೂಡಾ ಇಲ್ಲಿ ಪಾಲನೆಯಾಗುತ್ತಿಲ್ಲ ಎನ್ನುವುದು ಆತಂಕದ ವಿಷಯ.

Exit mobile version