ಪ್ರಬುದ್ಧ ಜಾಣತನದ ನಿಲುವು ಪ್ರಕಟಿಸಲು ಪ್ರಧಾನಿಗೆ ಪತ್ರ

ಲಾಕ್ ಡೌನ್ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಮುಖಂಡ ಟಿ.ಈಶ್ವರ ಬಹಿರಂಗ ಪತ್ರ ಬರೆದಿದ್ದಾರೆ.

ಪ್ರಧಾನಿ ಅವರಿಗೆ,

ತಾವು ಶೀಘ್ರದಲ್ಲಿ ಜನತೆಯನ್ನು ಕುರಿತ ದೃಢ ನಿಲುವಿಗೆ ಪ್ರಬುದ್ಧ ಭಾಷಣ ಮಾಡಿ ಜನತೆಗೆ ಆತ್ಮಸ್ಥೈರ್ಯ ತುಂಬಬೇಕೆಂದು ನನ್ನ ನಮ್ರ ಮನವಿ.
ಸರ್ ಕರೋನಾ ವೈರಸ್ ಎದುರಿಸಲು ದೀರ್ಘ ಲಾಕ್ ಡೌನ್ ಒಂದೇ ಮಾರ್ಗ ಸರಿಯಲ್ಲ, ಎಂಬುದು ತಮ್ಮ ಗಮನಕ್ಕೂ ಬಂದಿದೆ. ಈಗ ನಿಮ್ಮ ಹಾಗೂ ನಿಮ್ಮ ಸರ್ಕಾರದ ಜಾಣತನವನ್ನು ಪ್ರದರ್ಶಿಸಬೇಕು. ಎಷ್ಟು ಸಾಧ್ಯವೋ ಅಷ್ಟು ಬೇಗ ಲಾಕ್ ಡೌನ್ ತೆರವುಗೊಳಿಸುತ್ತಾ, ಉದ್ಯೋಗ ಪ್ರಾರಂಭಿಸಿ. ಇಲ್ಲವಾದರೆ ಕರೋನಾ ಸಾವಿಗಿಂತ, ಹಸಿವಿನಿಂದ ಸಾವನ್ನಪ್ಪುವರ ಪ್ರಮಾಣವೇ ಅಧಿಕವಾಗುವ ಲಕ್ಷಣಗಳು ತಮ್ಮ ಸರ್ಕಾರದ ಗಮನಕ್ಕೆ ಬಂದಿರಲೇಬೇಕು. ತಾವು ತಕ್ಷಣ ದೇಶಾದ್ಯಂತ ಶೈಕ್ಷಣಿಕ ಹಾಗೂ ಕೃಷಿಕ ವಲಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ಕಾರಣ ರೈತರು ಮೈಮರೆತರೆ ಪೂರ್ತಿ ಒಂದು ವರ್ಷದ ಫಸಲು ಕೈಗೆ ಸಿಗುವುದಿಲ್ಲ ಹಾಗೆಯೇ ಶೈಕ್ಷಣಿಕವಾಗಿ ಮೈಮರೆತರೆ ಇಡೀ ಒಂದು ಸಮುದಾಯ ವಂಚಿತವಾಗುತ್ತದೆ.
ನಿರ್ದಿಷ್ಟ ಸುರಕ್ಷತೆಯನ್ನು ಈ ಎರಡೂ ವಲಯಕ್ಕೆ ನೀಡಿ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರಬೇಕಾಗಿದೆ. ಶೈಕ್ಷಣಿಕವಾಗಿ ಅದರಲ್ಲೂ ಪ್ರಾಥಮಿಕ, ಮಾಧ್ಯಮಿಕ ಪದವಿಪೂರ್ವ ಶಿಕ್ಷಣವನ್ನು ಆನ್‌ಲೈನ್ ಶಿಕ್ಷಣ ನೀಡುವ ಕುರಿತು ಚರ್ಚೆ ನಡೆಯುತ್ತಿದೆ, ಗ್ರಾಮೀಣ ಭಾರತಕ್ಕೆ ಇದು ಸಾಧ್ಯವೇ? ಆ ವ್ಯವಸ್ಥೆ ನಮ್ಮಲ್ಲಿ ಇದೆಯೇ? ಹಾಗಾಗಿ ದೂರ ಶಿಕ್ಷಣದ ಚಿಂತನೆ ಕೈಬಿಟ್ಟು ಸುರಕ್ಷಿತ ವ್ಯವಸ್ಥೆಯೊಂದಿಗೆ ಸಮಗ್ರ ಶಿಕ್ಷಣ ಪ್ರಾರಂಭಿಸಬೇಕು ಹಾಗೂ ಭಾರತದ ಬಡ ಜನರಿಗೆ, ಬಡ ರೋಗಿಗಳಿಗೆ ತಕ್ಷಣ ನೆರವಿನ ಹಸ್ತ ಘೋಷಿಸಬೇಕು ಮತ್ತು ಸಮಗ್ರ ಆರ್ಥಿಕತೆ ಮೇಲೆತ್ತಲು ಜಾಣತನದ ನಿಲುವನ್ನು ಪ್ರಕಟಿಸಬೇಕೆಂದು ನಮ್ರ ವಿನಂತಿ.
ಇಂತಿ ತಮ್ಮ ವಿಶ್ವಾಸಿ
ಟಿ. ಈಶ್ವರ
ಕಾಂಗ್ರೆಸ್ ಮುಖಂಡರು, ಮಾಜಿ ಅಧ್ಯಕ್ಷರು,ಅರಣ್ಯ ಕೈಗಾರಿಕಾ ನಿಗಮ,ಕರ್ನಾಟಕ ಸರ್ಕಾರ

Exit mobile version