ರಾಜ್ಯದಲ್ಲಿ ಮೂರು ದಿನಗಳ ಕಾಲ ಇರಲಿದೆ ಭರಣಿಯ ಆರ್ಭಟ!
ಬೆಂಗಳೂರು : ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯ ಆರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಬಂಗಾಳ ಕೊಲ್ಲಿ, ಅರಬ್ಬಿ ಸಮುದ್ರಗಳಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಅಂಡೋಮಾನ್, ನಿಕೋಬರ್ ನಲ್ಲಿ ವಾಯುಭಾರ ಕುಸಿತ ಕಂಡಿದೆ. ಮಧ್ಯಪ್ರದೇಶದಿಂದ ತಮಿಳುನಾಡಿನವರೆಗೂ ಟ್ರಪ್ ನಿರ್ಮಾಣವಾಗಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದೆ. ಇದು ಹೀಗೆಯೇ ಮೂರು ದಿನಗಳ ಕಾಲ ಮುಂದುವರೆಯಲಿದೆ ಎಂದು ಇಲಾಖೆ ತಿಳಿಸಿದೆ.
ಹಲವೆಡೆ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಹಗುರವಾಗಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ನಿನ್ನೆ ರಾತ್ರಿಯಿಂದ ಬೆಂಗಳೂರಿನಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ. ಅಲ್ಲದೇ, ಹಲವು ಜಿಲ್ಲೆಗಳಲ್ಲಿಯೂ ಮಳೆ ಚನ್ನಾಗಿ ಸುರಿದಿದೆ.
ಭರಣಿ ಮಳೆ ಇಳೆಯನ್ನು ತಂಪಾಗಿಸುತ್ತಿರುವ ಕಾರಣ ರೈತ ಸಂಕುಲ ಸಂತಸ ವ್ಯಕ್ತಪಡಿಸುತ್ತಿದೆ. ಕೋಲಾರ ಚಿಕ್ಕಬಳ್ಳಾಪುರ ರಾಮನಗರ ಸೇರಿದಂತೆ ಕೆಲವು ಕಡೆಗಳಲ್ಲಿ ಜಿಟಿಜಿಟಿ ಮಳೆಯಾಗಿದೆ. ರಾಜ್ಯದ ಒಳನಾಡಿನಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಕುರಿತು ವರದಿಯಾಗಿದೆ.
